ಸ್ಥಳೀಯ
ಸ್ಥಳೀಯ
3 ದಿನ
ಪ್ರೆಸ್ ಕ್ಲಬ್ ಲೇಖಕ
16
ಗೋಹತ್ಯೆ ತಡೆ ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆಯಲು ಪಟ್ಟು; ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ
ಗೋ ರಕ್ಷಕರ ಮೇಲಿನ ಪ್ರಕರಣ ಹಿಂಪಡೆಯಲು ಆಗ್ರಹ
ಕಿತ್ತೂರಿನಲ್ಲಿ ಗೋಹತ್ಯೆ ವಿರೋಧಿ ಹೋರಾಟ; ಅಧಿಕಾರಿಗಳಿಗೆ ಮುತ್ತಿಗೆ ಎಚ್ಚರಿಕೆ
ಪ್ರಕರಣ ವಾಪಸು ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ
ಗೋವು ಹಿಂಸೆ ಖಂಡಿಸಿ ಬಜರಂಗದಳ–ವಿಹಿಂಪ ಕಾರ್ಯಕರ್ತರ ಆಕ್ರೋಶ
‘ಗೋ ರಕ್ಷಕರನ್ನೇ ಆರೋಪಿಗಳನ್ನಾಗಿಸಬೇಡಿ’ – ಕಿತ್ತೂರಿನಲ್ಲಿ ಪ್ರತಿಭಟನೆ
ಚನ್ನಮ್ಮನ ಕಿತ್ತೂರು:’ ಗೋಹತ್ಯೆ ಮತ್ತು ಗೋವುಗಳನ್ನು ಹಿಂಸಾತ್ಮಕವಾಗಿ ಕೂಡಿ ಹಾಕಿರುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಅವುಗಳನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಿದವರ ಮೇಲೆ ಪೊಲೀಸರು ಪ್ರಕರಣಗಳನ್ನು ದಾಖಲು ಮಾಡಿದ್ದಾರೆ. ಅವುಗಳನ್ನು ಕೂಡಲೇ ಹಿಂಪಡೆಯಬೇಕು’ ಎಂದು ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪಟ್ಟು ಹಿಡಿದರು.
ಇಲ್ಲಿನ ಕಸಾಯಿ ಗಲ್ಲಿಯಲ್ಲಿ ಮೇವು, ನೀರು ನೀಡದೆ 58 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕೂಡಿ ಹಾಕಲಾಗಿದೆ. ಕೆಲವು ಹಸುಗಳನ್ನು ಹತ್ಯೆ ಮಾಡಲಾಗಿದೆ. ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಕೋಟೆ ಮಹಾದ್ವಾರದ ಎದುರು ಮಂಗಳವಾರ ಆಯೋಜಿಸಲಾಗಿದ್ದ ಪ್ರತಿಭಟನೆ ಸಭೆಯಲ್ಲಿ ಈ ಘಟನೆ ನಡೆಯಿತು.
‘ಗೋ ಹತ್ಯೆ ಮಾಡಿದವರ ಮೇಲೆ ಕಠಿಣ ಕ್ರಮವನ್ನು ಪೊಲೀಸರು ಕೈಗೊಳ್ಳದೆ ಅವುಗಳನ್ನು ತಡೆಯಲು ಹೋದವರ ಮೇಲೆ ಮುಂಜಾಗ್ರತೆ ಕ್ರಮದ ಹೆಸರಿನಲ್ಲಿ ಒಂದು ವರ್ಷದ ಅವಧಿವರೆಗೆ ಶಾಂತತೆಯಿಂದ ಇರುವುದಾಗಿ ವಿವರಣೆ ನೀಡಬೇಕು ಎಂದು ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರಿಗೆ ನೋಟಿಸು ಕೊಟ್ಟಿರುವ ಕೆಲಸ ನಿಮ್ಮಂದಲೇ (ಪೊಲೀಸರಿಂದ) ಆಗಿದೆ. ಅವರೇನು ಶಾಂತತೆ ಭಂಗ ಮಾಡಲು ಹೋಗಿದ್ದರು’ ಎಂದು ಮುಖಂಡ ಪುನೀತ್ ಕೆರೆಹಳ್ಳಿ ಪೊಲೀಸರನ್ನು ಪ್ರಶ್ನಿಸಿದರು.
ಅದಕ್ಕೆ ಡಿವೈಎಸ್ ಪಿ ವೀರಯ್ಯ ಹಿರೇಮಠ ಸಮಜಾಯಿಷಿ ನೀಡಲು ಹೋದರು. ಇದಕ್ಕೊಪ್ಪದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ವಿಶ್ವಹಿಂದೂ ಪರಿಷತ್ ಮುಖಂಡ ಕೃಷ್ಣಾಜಿ ಭಟ್ ಇತರರು ‘ಪ್ರಕರಣ ವಾಪಸು ಪಡೆಯದಿದ್ದರೆ ವೇದಿಕೆ ಬಿಟ್ಟು ಕದಲುವುದಿಲ್ಲ’ ಎಂದು ಪಟ್ಟು ಹಿಡಿದರು. ವೇದಿಕೆಯಲ್ಲಿದ್ದ ತಹಶೀಲ್ದಾರ್ ಕಲಗೌಡ ಪಾಟೀಲ ಅವರು ‘ನಿಮ್ಮ ಪರವಾಗಿ ವಕೀಲರು ಹಾಜರಾದರೆ ಪ್ರಕರಣ ಮುಕ್ತಾಯಗೊಳಿಸಲಾಗುವುದು’ ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪಿಗೆ ರೂಪದಲ್ಲಿ ಕಾರ್ಯಕರ್ತರು ಘೋಷಣೆ ಕೂಗಿದರು. ನಂತರ ಮುಖಂಡರು ಪ್ರತಿಭಟನೆಯನ್ನು ಹಿಂಪಡೆದರು.
ಇದಕ್ಕೂ ಮೊದಲು ವಿಶ್ವಹಿಂದೂ ಪರಿಷತ್ ಮುಖಂಡ ಕೃಷ್ಣಾಜಿ ಭಟ್ ಮಾತನಾಡಿ, ‘ಯಾವುದೋ ಕಾಲದಲ್ಲಿ ಖುರ್ಬಾನಿ ಹೆಸರಿನಲ್ಲಿ ನಡೆಯುತ್ತಿದ್ದ ಗೋವು ಹತ್ಯೆ ಮಾಡುವುದು ಬಿಟ್ಟರೆ ನಾವೆಲ್ಲ ಒಂದಾಗಿ ಬಾಳಲು ಸಾಧ್ಯವಿದೆ’ ಎಂದರು.
ಮುಖಂಡ ಪುನೀತ್ ಕೆರೆಹಳ್ಳಿ ಮಾತನಾಡಿ, ‘ಯಾವನೋ ಒಬ್ಬ ಮೌಲ್ವಿ ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎನ್ನುತ್ತಿದ್ದಾನೆ. ಇದು ದಿಕ್ಕು ತಪ್ಪಿಸುವ ಕೆಲಸವಾಗಿದೆ’ ಎಂದು ವಾಗ್ದಾಳಿ ನಡೆಸಿದರು.
ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಕಾರಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ದೇಗುಲಹಳ್ಳಿ, ಅಂಬಡಗಟ್ಟಿಯ ಮಠದ ವೀರೇಶ್ವರ ಸ್ವಾಮೀಜಿ, ಮುಖಂಡರಾದ ಪ್ರಮೋದಕುಮಾರ ಒಕ್ಕುಂದಮಠ, ಬಸವರಾಜ ಸುಗೂರ, ಪುಂಡಲೀಕ ದಳವಾಯಿ, ಮಲ್ಲಸರ್ಜ್ ರೆಡ್ಡಿ, ಮಡಿವಾಳಪ್ಪ ಮುರಗೋಡ, ಲಕ್ಷ್ಮಿ ಇನಾಮದಾರ, ಬಸವರಾಜ ಪರವಣ್ಣವರ, ಶ್ರೀಕರ ಕುಲಕರ್ಣಿ, ಕಿತ್ತೂರು ಸೇರಿ ಹತ್ತಾರು ಊರುಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಡಿವೈಎಸ್ ಪಿ ವೀರಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
*****